ಶೃಂಗೇರಿ
	ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಕೊಪ್ಪ ತಾಲ್ಲೂಕು, ಪೂರ್ವದಲ್ಲಿ ಚಿಕ್ಕಮಗಳೂರು, ಪಶ್ಚಿಮದಲ್ಲಿ ಉಡುಪಿ ಜಿಲ್ಲೆ, ದಕ್ಷಿಣದಲ್ಲಿ ಮೂಡಿಗೆರೆ ತಾಲ್ಲೂಕುಗಳು ಸುತ್ತುವರಿದಿವೆ. 49 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 433.7 ಚ.ಕಿಮೀ. ಜನಸಂಖ್ಯೆ 3,6932. 

	ಜಿಲ್ಲೆಯ ಪಶ್ಚಿಮಕ್ಕಿರುವ ಈ ತಾಲ್ಲೂಕು ಮಲೆನಾಡ ಪ್ರದೇಶಕ್ಕೆ ಸೇರಿದ್ದು ಪಶ್ಚಿಮಘಟ್ಟಗಳ ನೆರಳಿನಲ್ಲಿದೆ. ಸು.17,818 ಹೆಕ್ಟೇರು ಅರಣ್ಯ ಪ್ರದೇಶವಿದ್ದು ಬೆಲೆಬಾಳುವ ಮರಗಿಡಗಳಿಂದ ಕೂಡಿದೆ. ತಂಪಾದ ಹಿತಕರ ವಾಯುಗುಣವಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 4009.04 ಮಿಮೀ. ಇಲ್ಲಿನ ಭೂಮಿ ಗಟ್ಟಿಮಣ್ಣು ಮತ್ತು ಕೆಮ್ಮಣ್ಣಿನಿಂದ ಕೂಡಿದೆ. ನದಿ ಬಯಲು ಫಲವತ್ತಾಗಿದೆ. 

	ಈ ತಾಲ್ಲೂಕಿನ ಮುಖ್ಯ ನದಿ ತುಂಗಾ. ತಾಲ್ಲೂಕಿನ ಅಂಚಿನಲ್ಲಿ ಶೃಂಗೇರಿಗೆ ಸು.25 ಕಿಮೀ ನೈಋತ್ಯ ದಿಕ್ಕಿನಲ್ಲಿ ಪಶ್ಚಿಮಘಟ್ಟಶ್ರೇಣಿಯ ವರಾಹ ಪರ್ವತದ ಗಂಗಾಮೂಲ ಎಂಬಲ್ಲಿ ಹುಟ್ಟುವ ಈ ನದಿ ತಾಲ್ಲೂಕಿನ ಮಧ್ಯದಲ್ಲಿ ನೈಋತ್ಯದಿಂದ ಈಶಾನ್ಯಕ್ಕೆ ಹರಿಯುತ್ತದೆ. ಇದರ ಆಶ್ರಯ ದಿಂದ ಬತ್ತ, ಕಬ್ಬು ಮತ್ತು ಅಡಕೆಯನ್ನು ವಿಶೇಷವಾಗಿ ಬೆಳೆಯುತ್ತಾರೆ. ತಾಲ್ಲೂಕಿ ನಲ್ಲಿ ಅರಣ್ಯೋತ್ಪನ್ನದ ಮತ್ತು ಅರಣ್ಯಾವಲಂಬಿ ಗೃಹಕೈಗಾರಿಕೆಗಳಿವೆ. 

	ಶೃಂಗೇರಿಗೆ ದಕ್ಷಿಣದಲ್ಲಿ 5 ಕಿಮೀ ದೂರದಲ್ಲಿರುವ ಬೆಟ್ಟಗೆರೆ ಗ್ರಾಮಕ್ಕೆ ಸೇರಿರುವ ತನಿಕೋಡು ಎಂಬಲ್ಲಿ ಶಂಕರನಾರಾಯಣ ದೇವಾಲ ಯವಿದೆ. ತಪ್ಪನಕೊಪ್ಪ ಎಂಬಲ್ಲಿ ಮೂರು ಅಂಕಣದ ವಿಚಿತ್ರವಾದ ಮಾಸ್ತಿಕಲ್ಲೊಂದಿದೆ. ಶೃಂಗೇರಿಯ ದಕ್ಷಿಣಕ್ಕೆ 2 ಕಿಮೀ ದೂರದಲ್ಲಿ ತುಂಗಾ ನದಿಯ ಎಡದಂಡೆಯ ಮೇಲಿರುವ ವಿದ್ಯಾರಣ್ಯಪುರವನ್ನು 1366ರಲ್ಲಿ ವಿದ್ಯಾರಣ್ಯರು ನಿಧನರಾದಾಗ ಅವರ ನೆನಪಿಗಾಗಿ ವಿಜಯ ನಗರದ ದೊರೆ ಎರಡನೆಯ ಹರಿಹರ ದತ್ತಿಕೊಟ್ಟ ಕಾರಣ ಗ್ರಾಮಕ್ಕೆ ವಿದ್ಯಾರಣ್ಯಪುರವೆಂಬ ಹೆಸರು ಬಂತೆಂದು ತಿಳಿದುಬರುತ್ತದೆ. ಇದು ವಿದ್ಯಾತೀರ್ಥರು ತಪಸ್ಸುಮಾಡಿದ ಸ್ಥಳವೆಂದೂ ಪ್ರತೀತಿ. ಈ ಗ್ರಾಮದ ಒಂದು ಭಾಗವನ್ನು ವಸಿಷ್ಠಾಶ್ರಮವೆಂದು ಗುರುತಿಸುತ್ತಾರೆ. ಈ ಗ್ರಾಮದ ಬಳಿ ಮಾತ್ರ ತುಂಗಾನದಿ ಪಶ್ಚಿಮಾಭಿಮುಖವಾಗಿ ಸ್ವಲ್ಪದೂರ ಹರಿಯುತ್ತದೆ. ಇಲ್ಲಿ ಗಣಪತಿ, ವಿದ್ಯಾಶಂಕರ ದೇವಾಲಯಗಳೂ ಇಕ್ಕೇರಿಯ ಶಿವಪ್ಪನಾಯಕ ಕಟ್ಟಿಸಿದುದೆಂದು ಹೇಳುವ ಕಲ್ಲಿನ ಕಟ್ಟಡದ ಸದಾಶಿವ ದೇವಾಲಯವೂ ಇವೆ. ಶೃಂಗೇರಿಗೆ ಪಶ್ಚಿಮದಲ್ಲಿ 10ಕಿಮೀ ದೂರದಲ್ಲಿರುವ ಗಂಧಗಟ್ಟ ಗ್ರಾಮಕ್ಕೆ ಸೇರಿದ ಅರ್ಧಿನಿಯಲ್ಲಿ ಸುಮಾರು 7 ಅಡಿ ಎತ್ತರವಿದ್ದು 6 ಹಂತಗಳುಳ್ಳ ಎರಡು ದೊಡ್ಡ ಮಾಸ್ತಿಕಲ್ಲುಗಳಿವೆ. ಶೃಂಗೇರಿಯ ಪಶ್ಚಿಮಕ್ಕೆ 10ಕಿಮೀ ದೂರದಲ್ಲಿರುವ ಋಷ್ಯಶೃಂಗಪುರದಲ್ಲಿ ದ್ರಾವಿಡ ಶೈಲಿಯಲ್ಲಿರುವ ಪ್ರಸಿದ್ಧ ಋಷ್ಯಶೃಂಗೇಶ್ವರ ದೇವಾಲಯವಿದೆ. ಈ ದೇವಾಲಯದ ನವರಂಗದಲ್ಲಿ ಪ್ರಾಣಿ ಮತ್ತು ಮನುಷ್ಯ ಮಿಶ್ರಿತವಾದ ವಿಚಿತ್ರ ಚಿತ್ರಗಳನ್ನು ಕೆತ್ತಲಾಗಿದೆ. ಸುಕನಾಸಿಯಲ್ಲಿ ಎರಡೇ ಕೈಗಳಿದ್ದು ಸೊಂಡಿಲು ಬಲಕ್ಕೆ ತಿರುಗಿರುವ ಗಣಪತಿ ವಿಗ್ರಹ ಒಂದು ಅಪೂರ್ವ ಕೃತಿಯಾಗಿದೆ. 

	ಶೃಂಗೇರಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಚಿಕ್ಕಮಗಳೂರಿಗೆ ವಾಯವ್ಯದಲ್ಲಿ 90 ಕಿಮೀ ದೂರದಲ್ಲಿ ತುಂಗಾನದಿಯ ಎಡದಂಡೆಯ ಮೇಲಿದೆ. ಜನಸಂಖ್ಯೆ 4,253.

	ಇದೊಂದು ಮುಖ್ಯ ವ್ಯಾಪಾರ ಸ್ಥಳ. ಅಡಕೆ, ಬಾಳೆಹಣ್ಣು, ಅಕ್ಕಿ ಇಲ್ಲಿಂದ ಸುತ್ತುಮುತ್ತಲ ಪ್ರದೇಶಗಳಿಗೆ ನಿರ್ಯಾತವಾಗುತ್ತವೆ. ಜೊತೆಗೆ ಇದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಯಾತ್ರಾಸ್ಥಳ. ವಿಭಾಂಡಕ ಮಹರ್ಷಿಯ ಮಗನಾದ ಋಷ್ಯಶೃಂಗನ ಜನ್ಮಸ್ಥಳವಾದುದರಿಂದ  ಇದಕ್ಕೆ ಶೃಂಗಗಿರಿ ಎಂಬ ಹೆಸರುಬಂತೆಂದೂ ಕ್ರಮೇಣ ಶೃಂಗೇರಿಯಾಯಿತೆಂದೂ ಪ್ರತೀತಿ. ಶಾಸನಗಳಲ್ಲಿ ಇದನ್ನು ಶೃಂಗಿಪುರ ಎಂದು ಉಲ್ಲೇಖಿಸಲಾಗಿದೆ. 8ನೆಯ ಶತಮಾನದಲ್ಲಿ ಶಂಕರರು ಹಿಂದುಧರ್ಮದ ಪುನರುತ್ಥಾನಕ್ಕಾಗಿ ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠಗಳಲ್ಲಿ ಶೃಂಗೇರಿ ಒಂದು. ಮಠದ ಜೊತೆಗೆ ಶಂಕರಾಚಾರ್ಯರು ಕಾಶ್ಮೀರದಿಂದ ತಂದ ಶಾರದೆಯ ವಿಗ್ರಹವನ್ನು ಇಲ್ಲಿ ಸ್ಥಾಪಿಸಿ ದೇವಾಲಯವನ್ನು ಕಟ್ಟಿಸಿದರು. ದೇವಸ್ಥಾನ ಮಠದ ಆವರಣದಲ್ಲೇ ಇದೆ. 

	ವಿಜಯನಗರ ಸಾಮ್ರಾಜ್ಯದ ಉಗಮಕ್ಕೆ ಕಾರಣರಾದ ವಿದ್ಯಾರಣ್ಯರು ಶೃಂಗೇರಿ ಪೀಠಾಧಿಪತಿಗಳಾಗಿದ್ದರು. ವಿಜಯನಗರ ಕಾಲದ ನೂರಾರು ಶಾಸನಗಳನ್ನು ಈ ಸುತ್ತಲಿನ ಪ್ರದೇಶಗಳಲ್ಲಿ ಕಾಣಬಹುದು. ಶೃಂಗೇರಿ ಪೀಠಾಧಿಪತಿಗಳನ್ನು ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಎಂಬುದಾಗಿ ಕರೆಯಲಾಗುತ್ತಿತ್ತು. ಒಂದನೆಯ ಹರಿಹರ, ಬುಕ್ಕ, ಎರಡನೆಯ ಹರಿಹರ, ವಿರೂಪಾಕ್ಷ ಮುಂತಾದ ವಿಜಯನಗರದ ದೊರೆಗಳು ಶೃಂಗೇರಿಗೆ ಭೇಟಿ ಕೊಟ್ಟು, ಅನೇಕ ದತ್ತಿಗಳನ್ನೂ ಉಂಬಳಿಗ ಳನ್ನೂ ನೀಡಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಲ್ಲಿಯ ಪೀಠಾಧಿಪತಿಗಳ ಹೆಸರಿನಲ್ಲಿ ಹಾಗೂ ತಮ್ಮ ಹೆಸರಿನಲ್ಲಿ ಅನೇಕ ಅಗ್ರಹಾರಗಳನ್ನು ಕಟ್ಟಿಸಿ, ಪೀಠಾಧಿಪತಿಗಳನ್ನು ತಮ್ಮ ರಾಜಧಾನಿಗೆ ಬರಮಾಡಿಕೊಂಡು ಅವರ ಆಶೀರ್ವಾದ, ಅನುಗ್ರಹಗಳನ್ನು ಪಡೆದರೆಂದು ತಿಳಿದುಬರುತ್ತದೆ. 1565ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನಾನಂತರ ಕೆಳದಿಯ ನಾಯಕರು ಶೃಂಗೇರಿಗೆ ರಕ್ಷಣೆ ನೀಡಿದರು. ಸದಾಶಿವನಾಯಕನ ಕಾಲದಲ್ಲಿ ಕೆಳದಿ ರಾಜ್ಯಕ್ಕೂ ಶೃಂಗೇರಿ ಸಂಸ್ಥಾನಕ್ಕೂ ಸಂಪರ್ಕ ಆರಂಭವಾ ಯಿತು. ಶೃಂಗೇರಿಯ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಬಹಳ ಶ್ರಮಿಸಿದ ಮೊದಲನೆಯ ವೆಂಕಟಪ್ಪನಾಯಕ ಶ್ರೀಗಳಿಂದ ವೈದಿಕ-ಅದ್ವೈತ-ಸಿದ್ಧಾಂತಪ್ರತಿಷ್ಠಾಪಕ ಎಂಬ ಬಿರುದನ್ನು ಪಡೆದ.

	ಮೈಸೂರಿನ ಕಂಠೀರವ ನರಸರಾಜ ಒಡೆಯರ್ ಮುಂತಾದವರು ಶೃಂಗೇರಿ ಮಠದ ಬಗ್ಗೆ ಪೂಜ್ಯಭಾವನೆ ಹೊಂದಿದ್ದರು. ಮೈಸೂರಿನ ಇಮ್ಮಡಿ ಕೃಷ್ಣರಾಜ ಒಡೆಯರು ಶ್ರೀಗಳಿಗೆ ಅನೇಕ ಅಮೂಲ್ಯ ಕಾಣಿಕೆಗಳನ್ನು ಕಳುಹಿಸಿ, ಶೃಂಗಪುರ ರತ್ನಸಿಂಹಾಸನದ ಮೇಲೆ ಕುಳಿತಿರುವ ಯೋಗಸಾಮ್ರಾಜ್ಯಾಧಿಪತಿಯೆಂಬುದಾಗಿ ಶ್ರೀಗಳನ್ನು ವರ್ಣಿಸಿದರು. ಶೃಂಗೇರಿ ಸಂಸ್ಥಾನಕ್ಕೂ ಮತ್ತು ಮರಾಠರಿಗೂ ಉತ್ತಮ ಸಂಬಂಧವಿದ್ದಿತೆಂದು ತಿಳಿದುಬರುತ್ತದೆ. ದೇವಾಲಯದ ಜೀರ್ಣೋದ್ಧಾರ ಮತ್ತು ಶಾರದಾವಿಗ್ರಹದ ಪ್ರತಿಷ್ಠಾಪನೆಗಾಗಿ ಅನೇಕ ಕಾಣಿಕೆಗಳನ್ನು ಟಿಪ್ಪುಸುಲ್ತಾನ್ ಕಳುಹಿಸಿದನೆಂದು ತಿಳಿದುಬರುತ್ತದೆ. 1791-98ರ ನಡುವೆ ಟಿಪ್ಪು ಬರೆಸಿದ ಇಪ್ಪತ್ತೊಂಬತ್ತು ಪತ್ರಗಳು ಶ್ರೀಮಠದ ಬಗ್ಗೆ ಅವನಿಗಿದ್ದ ನಿಷ್ಠೆ, ಶ್ರದ್ಧೆ ಮತ್ತು ಪೂಜ್ಯಭಾವನೆಗಳ ಪ್ರತೀಕವಾಗಿವೆ. ಹೈದರಾಬಾದಿನ ನಿಜಾಮ್ ಉಲ್ ಮುಲ್ಕ್ ಎಂಬವನು ಶ್ರೀಗಳಿಗೆ ಅನೇಕ ಫರ್ಮಾನ, ಸನ್ನದುಗಳನ್ನು ಮತ್ತು ಕೆಲವು ವಿಶೇಷ ಸೌಲಭ್ಯಗಳನ್ನು ನೀಡಿದನೆಂದೂ ಅವನ ಈ ಕೊಡುಗೆಗಳನ್ನು ನಿಜಾಮ್ ಅಲಿಖಾನ್ ಊರ್ಜಿತಗೊಳಿಸಿದನೆಂದೂ ತಿಳಿದುಬರುತ್ತದೆ. ಮೈಸೂರಿನ ಚಾಮರಾಜ ಒಡೆಯರೂ ಶೃಂಗೇರಿ ಸಂಸ್ಥಾನಕ್ಕೆ ಅನೇಕ ಅಮೂಲ್ಯ ಕಾಣಿಕೆಗಳನ್ನು ಕಳುಹಿಸಿಕೊಟ್ಟಿದ್ದರು. ಮಾರ್ಕ್ ಕಬ್ಬನನ ಘೋಷಣೆಯಿಂದ ಶೃಂಗೇರಿಪೀಠಕ್ಕೆ ಹಿಂದಿನ ವಿಶೇಷ ಸೌಲಭ್ಯಗಳೆಲ್ಲವೂ ಇದ್ದಿತೆಂದು ಗೊತ್ತಾಗುತ್ತದೆ.

	ಎಂಟನೆಯ ಶತಮಾನದಲ್ಲಿ ಆಚಾರ್ಯ ಶಂಕರರು ಇಲ್ಲಿ ಮಠವನ್ನು ಸ್ಥಾಪಿಸುವುದಕ್ಕೆ ಮೊದಲು ಜೈನಮತದ ಪ್ರಾಬಲ್ಯವಿತ್ತೆಂಬುದಕ್ಕೆ ಈಗ ಪಾಳು ಬಿದ್ದಿರುವ ಹಾಗೂ ಪೂಜಾದಿಗಳು ನಡೆಯುತ್ತಿರುವ ನೂರಾರು ಬಸದಿಗಳು ಸಾಕ್ಷಿಗಳಾಗಿ ನಿಂತಿವೆ. ಇಲ್ಲಿರುವ ಶಂಕರಾಚಾರ್ಯರ ಗುಡಿಯನ್ನು ಚಾಳುಕ್ಯ ಶೈಲಿಯಲ್ಲಿ  ಕಟ್ಟಲಾಗಿದೆ. ಇದರ ಕೆತ್ತನೆ ಕಲಾಪೂರ್ಣವಾದದ್ದು.  ಇದನ್ನು ವಿದ್ಯಾಶಂಕರ ದೇವಾಲಯವೆಂದೂ ಕರೆಯುತ್ತಾರೆ. ಈ ದೇವಾಲಯದ ಪ್ರವೇಶದ್ವಾರದ ಬಲಗಡೆಯಲ್ಲಿ ವ್ಯಾಸರ ಪ್ರತಿಮೆ ಇದೆ. ಇದರ ಎದುರು ಇರುವ ಶಂಕರಾಚಾರ್ಯರ ವಿಗ್ರಹದ ಎಡಗೈಯಲ್ಲಿ ಓಲೆಗರಿ ಗ್ರಂಥವಿದೆ. ಈ ದೇವಸ್ಥಾನದ ಎರಡು ಕೊನೆಗಳೂ ಬೌದ್ಧರ ಚೈತ್ಯಾಲಯಗಳ ಆಕೃತಿ ಹೊಂದಿರುವುದು ಒಂದು ವಿಶೇಷ. ನವರಂಗ 12 ಕೆತ್ತನೆಯ ಕೇಂದ್ರಗಳಿಂದ ಕೂಡಿದೆ. 
ಕಂಬಗಳಲ್ಲಿ ಕೆತ್ತಿರುವ ಸಿಂಹಗಳ ಬಾಯಲ್ಲಿರುವ ಗುಂಡುಗಳನ್ನು ತಿರುಗಿಸಬಹುದು. ಆಯಾ ಮಾಸಗಳಲ್ಲಿ ಸೂರ್ಯಕಿರಣ ಕಂಬಗಳ ಮೇಲೆ ಬೀಳುವಂತೆ ಸೌರಮಾಸಗಳ ಅನುಕ್ರಮದಂತೆ ಕಂಬಗಳ ನಿರ್ಮಾಣವಾಗಿದೆ. 

	ಶೃಂಗೇರಿಗೆ ಸುಮಾರು ಒಂದೂವರೆ ಕಿಮೀ ದೂರದಲ್ಲಿ ತುಂಗಾ ನದಿ ದಂಡೆಯ ಮೇಲಿರುವ ಶಂಕರಾಚಾರ್ಯರ ಗುಡಿಯ ಬಳಿಯೇ ಶಂಕರರು ವೈಕುಂಠವಾಸಿಗಳಾದರೆಂದು ಪ್ರತೀತಿ. 
 (ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ